ಕೇಶವಸುತ, ದಾಮಲೆ

 	1866-1905. ಆಧುನಿಕ ಮರಾಠೀ ಸಾಹಿತ್ಯದ ಪ್ರವರ್ತಕರಲ್ಲೊಬ್ಬನೆಂದು ಹೆಸರಾಂತ ಕವಿ. ಮಹಾರಾಷ್ಟ್ರದ ದಾಪೋಲಿ ಜಿಲ್ಲೆಯ ವಲನೆ ಎಂಬ ಗ್ರಾಮದಲ್ಲಿ ಹುಟ್ಟಿದನೆನ್ನಲಾದ ಈತ ಕೊಂಕಣಸ್ಥ ಬ್ರಾಹ್ಮಣ ಮನೆತನಕ್ಕೆ ಸೇರಿದವ. ತಂದೆ ಕೇಶೋಪಂತ ದಾಮಲೆ ತಾಯಿ ಮಾಲದೌಲಿನ, ಈತನ ಬಾಲ್ಯದ ವಿವರಗಳು ತಿಳಿದಿಲ್ಲ. ಶಾರೀರಿಕವಾಗಿ ಈತ ಬಹು ಅಶಕ್ತ. ಆಟಪಾಟಗಳಲ್ಲಂತೂ ಅನಾಸಕ್ತ. ಇದರಿಂದಾಗಿ ಇವನಲ್ಲಿ ಗೊಣಗಾಡುವ ಸ್ವಭಾವ ಬೆಳೆದಿತ್ತು. ಯಾವಾಗಲೂ ಒಂಟಿಯಾಗಿರುತ್ತಿದ್ದ. ಸ್ವಭಾವತಃ ಈತ ಬಲು ನಾಚಿಕೆಯವ, ಹೆಚ್ಚು ಮಾತನಾಡುವವನಲ್ಲ. ಕ್ರೈಸ್ತಧರ್ಮದ ಕಡೆಗೆ ಈತನ ಒಲವು ಹೆಚ್ಚಿದ್ದಂತೆ ತೋರುತ್ತದೆ. ರತ್ನಗಿರಿ ಜಿಲ್ಲೆಯ ಖೇಡ, ನಾಗಪುರ ಮತ್ತು ಪುಣೆಗಳಲ್ಲಿ ಮೆಟ್ರಿಕ್‍ವರೆಗೆ ವಿದ್ಯಾಭ್ಯಾಸ ನಡೆಸಿ 1890ರಲ್ಲಿ ಜೀವನ ನಿರ್ವಹಣೆಗಾಗಿ ಮುಂಬಯಿಯಲ್ಲಿ ಅಧ್ಯಾಪಕವೃತ್ತಿ ಹಿಡಿದ. ಅಲ್ಲಿಂದ ಅಮೆರಿಕನ್ ಮಿಷನ್ನಿನ ಜ್ಞಾನೋದಯವೆಂಬ ನಿಯತಕಾಲಿಕದ ಕಚೇರಿಯಲ್ಲಿ ಕೆಲಸಕ್ಕೆ ಸೇರಿ 1892ರ ವರೆಗೆ ಮುಂಬಯಿಯಲ್ಲಿ ಇದ್ದ. ಅಲ್ಪ ವರಮಾನದಿಂದ ಜೀವನ ನಿರ್ವಹಣೆ ಕಷ್ಟವೆನಿಸಿದಾಗ ಖಾನದೇಶಕ್ಕೆ ಅಧ್ಯಾಪಕನಾಗಿ ಹೋದ(1897-1904). 1904ರಲ್ಲಿ ಧಾರವಾಡ ಪ್ರೌಢಶಾಲೆಗೆ ಮರಾಠಿ ಶಿಕ್ಷಕನಾಗಿ ಬಂದ. ಮರುವರ್ಷವೇ ಹುಬ್ಬಳ್ಳಿಯಲ್ಲಿ ತನ್ನ 39ನೆಯ ವಯಸ್ಸಿನಲ್ಲಿ ನಿಧನನಾದ.

ಮುಕ್ತಛಂದಸ್ಸಿನಲ್ಲಿ ರಚಿಸಿದ 132 ಭಾವಗೀತೆಗಳ ಸಂಕಲನ ಈತನ ಕೃತಿ. ವಿಶೇಷವಾಗಿ ಇಂಗ್ಲಿಷ್ ಸಾಹಿತ್ಯದಿಂದ ಪ್ರಭಾವಿತನಾದ ಈತ ತನ್ನ ಸಂಕಲನದಲ್ಲಿ 25 ಇಂಗ್ಲಿಷ್ ಕವನಗಳ ಅನುವಾದವನ್ನು ಸೇರಿಸಿದ್ದಾನೆ. ಇವುಗಳಲ್ಲಿ ಲಿರಿಕ್, ಓಡ್ ಮತ್ತು ಸಾನೆಟ್ ಮಾದರಿಗಳನ್ನು ಕಾಣಬಹುದು. ರಘುವಂಶ, ಕಿರಾತಾರ್ಜುನೀಯ ಕಾವ್ಯಗಳ ಭಾಗಶಃ ಮರಾಠಿ ಅನುವಾದವನ್ನೂ ಮಾಡಿದ್ದಾನೆ.

ಈತನಿಂದ ಹಿಂದೆ ಮರಾಠೀ ಕಾವ್ಯ ಸಂಪ್ರದಾಯಬದ್ಧವಾದ ಹಾದಿಯಲ್ಲಿ ಹರಿದಿದ್ದು ಯಾವ ಹೊಸ ವಿಧಾನಕ್ಕೂ ಒಳಗಾಗಿರಲಿಲ್ಲ. ಅಕ್ಷರವೃತ್ತದ ಲಯವನ್ನು ಹಿಡಿದು 2-4 ಸಾಲುಗಳ ಚರಣವನ್ನು ಕಟ್ಟುವ ಪದ್ಧತಿ ಮಾತ್ರ ರೂಢಿಯಲ್ಲಿತ್ತು. ಯಾವುದೋ ಒಂದು ಭಾವನೆಗೆ ಒಂದು ಗೊತ್ತಾದ ಕಾವ್ಯಬಂಧ ಮಾತ್ರ ಪ್ರಚುರವಾಗಿತ್ತು. ಈತ ಅಕ್ಷರವೃತ್ತಗಳಿಗೆ ಮಾತ್ರಾವೃತ್ತಗಳನ್ನೂ 2-4 ಸಾಲುಗಳ ನುಡಿಗಳಿಗೆ ಬದಲಾಗಿ 5-7 ಇಲ್ಲವೆ 7 ಸಾಲಿನ ನುಡಿಗಳನ್ನೂ ರಚಿಸಿ ಕಾವ್ಯರಚನೆಯಲ್ಲಿ ಹೊಸ ಮಾರ್ಗ ಹಿಡಿದ. ಛಂದಸ್ಸಿನ ಭಾರದಿಂದ ಕಾವ್ಯದ ಸ್ವಚ್ಛಂದ ಅಭಿವ್ಯಕ್ತಿಯ ಉಸಿರು ಕಟ್ಟುತ್ತಿದೆಯೆಂದು ಭಾವಿಸಿ ಅದನ್ನು ತೊರೆದು ಮರಾಠೀ ಕಾವ್ಯದಲ್ಲಿ ಹೊಸ ಸಂಕೇತ, ಸಂಪ್ರದಾಯಗಳನ್ನು ಅಳವಡಿಸಿದ. ಭಾಷೆಯಲ್ಲಿ ಹೊಸತನವನ್ನು ತಂದ.

ನಿಸರ್ಗದ ಬಗ್ಗೆ ಈತ ಅತ್ಯುತ್ತಮ ಕವನಗಳನ್ನು ಬರೆದುದಲ್ಲದೆ ಆಧುನಿಕ ಮರಾಠೀ ಕಾವ್ಯದ ಉತ್ತಮ ಪ್ರೇಮಗೀತೆಗಳನ್ನು ರಚಿಸಿದ. ತೀವ್ರಸಂವೇದನೆಯುಳ್ಳ ಈ ಕವಿ ಮರಾಠೀ ಕಾವ್ಯಪ್ರಪಂಚದಲ್ಲಿ ತೋರಿಸಿದ ಹೊಸ ಹಾದಿಯನ್ನು ಈತನ ಅನಂತರ ಬಂದ ಕವಿಗಳು ಅನುಸರಿಸಿದರು. ಇದರಿಂದಾಗಿ ಮರಾಠೀ ಕಾವ್ಯದ ದಿಕ್ಕೇ ಬದಲಾಯಿತು. ಈ ದೃಷ್ಟಿಯಿಂದ ಕೇಶವಸುತ ಆಧುನಿಕ ಮರಾಠೀ ಕಾವ್ಯದ ಚರಿತ್ರೆಯಲ್ಲಿ ಪ್ರಮುಖನೆನಿಸಿದ್ದಾನೆ.                                  
     (ಎಚ್.ಆರ್.ಡಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ